ವೀರಮಾತೆ ಅಹಲ್ಯಾ ಬಾಯಿ ಹೋಳ್ಕರ್



ರಾಷ್ಟ್ರ ಇತಿಹಾಸದಲ್ಲೇ ಸಾಮ್ರಾಜ್ಯಗಳನ್ನಾಳಿದ ರಾಣಿಯರಲ್ಲಿ ಮೊದಲ ಪಂಕ್ತಿಗೆ ಸೇರುವ ರಾಣಿಯರಲ್ಲಿ ಅಹಲ್ಯಾಬಾಯಿ ಹೋಳ್ಕರ್ ಒಬ್ಬರಾಗಿದ್ದಾರೆ. ವೀರಮಾತೆ ಅಹಲ್ಯಾಬಾಯಿ ಹೋಳ್ಕರ್ ಸಾಮಾಜಿಕ ಅಭಿವೃದ್ಧಿ, ಧಾರ್ಮಿಕ ಅಭಿವೃದ್ಧಿ, ಧರ್ಮ ಪುನರುತ್ಥಾನ ವಿಚಾರವಾಗಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಮೂರು ಶತಮಾನಗಳ ಹಿಂದೆ ಹುಟ್ಟಿ, ಹೇಗೆ ಬದುಕಬೇಕು? ಹಾಗೇ ಬದುಕಲು ನಾವು ರೂಢಿಸಿಕೊಳ್ಳಬೇಕಾದ ಅಂತಸ್ಸತ್ವ ಹೇಗಿರಬೇಕು? ಎಂಬಿತ್ಯಾದಿ ಸಂಗತಿಗಳನ್ನು ಬಹು ಸ್ಪುಟವಾಗಿ ತೋರಿಸಿಕೊಟ್ಟ ಅಹಿಲ್ಯಾ ಬಾಯಿಯ ಚರಿತ್ರೆ ಇಂದು ಮತ್ತು ನಾಳೆಗಳಿಗೆ ಬಹು ಪ್ರಸ್ತುತವೆನಿಸುತ್ತದೆ. ನಶಿಸಿ ಹೋಗುತ್ತಿರುವ ದೇಗುಲಗಳನ್ನು ನೋಡಿದಾಗ ಮನದಲ್ಲಿ ಮೂಡಿಬರುವುದು ಸಹ ಇದೇ ಅಹಲ್ಯಾ ಬಾಯಿ ಹೋಳ್ಕರ್. 




ಅಹಿಲ್ಯಾಬಾಯಿಯ ಜೀವನವಿದೆಯಲ್ಲ ಅದು ಬಹು ವಿಸ್ಮಯಕಾರಿ ಅವಳು 8 ವರ್ಷದವಳಾಗಿದ್ದಾಗಲೇ ಮದುವೆ ಆಗುತ್ತದೆ. ಗಂಡ ದುರ್ವ್ಯಸನಿ. 29 ವರ್ಷಕ್ಕೆ ವಿಧವೆ. ಅವತ್ತಿನ ರೂಢಿಯಂತೆ 'ಸತಿ' ಹೋಗಲು ನಿರ್ಧರಿಸುತ್ತಾಳೆ. ಮಾವ ಅತ್ತೆ ಪುಣ್ಯದವರು. ತಮ್ಮ ಮಗಳಾಗಿ ಬದುಕಿ ಸಾಮ್ರಾಜ್ಯ ಕಟ್ಟು ಅಂತ ಅಂಗಲಾಚುತ್ತಾರೆ. ಒಪ್ಪಿ ಮತ್ತೆ ಬದುಕುವ ಭರವಸೆ ಹೊಂದುತ್ತಾಳೆ. ಮಗನೂ ವಿಷಯ ಲಂಪಟ. ಹರೆಯದಲ್ಲೇ ಅವನು ಅಂತ್ಯಗೊಳ್ಳುತ್ತಾನೆ. ಆಗ, ತಾನೇ  ರಾಜಾಡಳಿತ ಸೂತ್ರವನ್ನು ಹಿಡಿಯುತ್ತಾಳೆ. ಶತ್ರುಗಳಿಗೆ ತಲೆ ನೋವಾಗುತ್ತಾಳೆ; ಪ್ರಜೆಗಳಿಗೆ ಮಾತೃಹೃದಯಿ ಯಾಗುತ್ತಾಳೆ. 



ಅಹಲ್ಯಾಬಾಯಿ ಹೋಳ್ಕರ್ 1725 ರಲ್ಲಿ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಧನಗರ್  ಕುಟುಂಬದಲ್ಲಿ ಜನಿಸಿದರು. ಆ ಕಾಲಘಟ್ಟದಲ್ಲಿ ಓದಲು ಮತ್ತು ಬರೆಯಲು ಕಲಿತ ಕೆಲವೇ ಸ್ತ್ರೀಯರಲ್ಲಿ ಅಹಿಲ್ಯಾ ಕೂಡ ಒಬ್ಬರಾಗಿದ್ದರು. ಒಮ್ಮೆ ಹಿರಿಯ ಬಾಜೀರಾವ್ ಪೇಶ್ವೆಯ ಸೈನ್ಯವು ಚೊಂಡಿಯಲ್ಲಿ ತಂಗಿತ್ತು. ಆಗ ಬಾಲಕಿ ಅಹಲ್ಯಾಬಾಯಿಯು ತನ್ನ ತಾಯಿಯೊಂದಿಗೆ ನದಿಯ ತೀರದಲ್ಲಿರುವ ದೇವಸ್ಥಾನಕ್ಕೆ ಹೋಗಿದ್ದಳು. ನದಿಯ ತೀರದ ಮರಳಿನಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುವಾಗ ಅವಳು ಒಂದು ಶಿವಲಿಂಗವನ್ನು ಮಾಡಿದಳು. ಒಮ್ಮೆಲೇ ಸೈನ್ಯದಲ್ಲಿರುವ ಒಂದು ಕುದುರೆಯು ದಿಕ್ಕೆಟ್ಟು ಮಕ್ಕಳಿರುವ ದಿಕ್ಕಿನತ್ತ ಓಡಲಾರಂಭಿಸಿತು. ಅಹಲ್ಯಾಳ ಸ್ನೇಹಿತರು ಓಡಿಹೋದರು, ಆದರೆ ಅಹಲ್ಯಾ ಆ ಶಿವಲಿಂಗವನ್ನು ರಕ್ಷಿಸಲು ಅದನ್ನು ಗಟ್ಟಿಯಾಗಿ ಅಪ್ಪಿಕೊಂಡಳು. ಬಾಜೀರಾವ್ ಪೇಶ್ವೆಯು ತಕ್ಷಣ ಅಲ್ಲಿಗೆ ಬಂದು “ಮಗು  ಆ ಕುದುರೆಯೂ ನಿನ್ನನ್ನು ತುಳಿಯಬಹುದೆಂಬ ಅರಿವಿತ್ತೆ?" ಎಂದು ಕಠೋರ ಸ್ವರದಲ್ಲಿ ಕೇಳಿದರು. ಆಗ ಅಹಲ್ಯಾ ಬಾಯಿಯು ಅವರ ಕಣ್ಣಲ್ಲಿ ಕಣ್ಣಿಟ್ಟು ಧೈರ್ಯದಿಂದ “ನಾನು ಶಿವ ಲಿಂಗವನ್ನು ನಿರ್ಮಿಸಿದ್ದೇನೆ ಹಾಗೂ ನನ್ನ ಹಿರಿಯರು ನಮ್ಮ ಪರಂಪರೆಯನ್ನು  ಪ್ರಾಣ ನೀಡಿಯಾದರೂ ರಕ್ಷಿಸಬೇಕು ಎಂದು ಹೇಳಿದ್ದಾರೆ ಹಾಗೂ ಈಗ ನಾನು ಅದನ್ನೇ ಮಾಡಿದ್ದೇನೆ ” ಎಂದರು. ಬಾಜೀರಾವ್ ಗೆ ಇಂತಹ ದಿಟ್ಟ ಮಾತುಗಳನ್ನು ಕೇಳಿ ಆನಂದವಾಯಿತು. 


ಇಂದೋರ್‌ನ ಹೋಳ್ಕರ್ ದೊರೆ ಆಗಿದ್ದ ಮಲ್ಹಾರ್ ರಾವ್ ಹೋಳ್ಕರ್ ಅವರು 8 ವರ್ಷತುಂಬಿದ ಅಹಿಲ್ಯಾರನ್ನು ತಮ್ಮ ಮಗ ಖಂಡೇರಾವ್ ಗೆ ವಿವಾಹ ಮಾಡಿಕೊಂಡರು. 1754 ರಲ್ಲಿ ರಾಜಸ್ಥಾನದಲ್ಲಿ ನಡೆದ ಓರ್ವ ಕದನದಲ್ಲಿ ಖಂಡೇರಾವ್ ಪ್ರಾಣ ಕಳೆದುಕೊಂಡರು. ಮಲ್ಹರ್ ರಾವ್ 1765 ರಲ್ಲಿ ನಿಧನರಾದರು ನಂತರ ಮತ್ತೇ ದುರ್ವಿಧಿ ಅಹಲ್ಯಾರನ್ನು ಅವರಿಸುತ್ತೆ 1767 ರಲ್ಲಿ ತಮ್ಮ ಪುತ್ರ ಮಾಲೇರಾವ್ ಕಳೆದುಕೊಳ್ಳುತ್ತಾಳೆ. ಮಗನ ಮರಣದ ನಂತರ ಅವರು ಒಂದೆರಡು ವರ್ಷಗಳ ಕಾಲ ಸಿಂಹಾಸನವನ್ನು ವಹಿಸಿಕೊಂಡರೂ ಸಹ ಅಹಲ್ಯಾಬಾಯಿ ರಾಜಪ್ರತಿನಿಧಿಯಾಗಿದ್ದರು. ನಂತರ ಅಹಲ್ಯಾಬಾಯಿ 1767 ರಲ್ಲಿ ಇಂದೋರ್‌ನ ರಾಣಿಯಾದರು. 


ಇದೇ ಕಾಲಘಟ್ಟದಲ್ಲಿ ಮೊಘಲರ ವಿರುದ್ದ ಪಾಣಿಪತ್ ಕದನದಲ್ಲಿ ಪೇಶ್ವೆಗಳು ಸೋತಿದ್ದರಿಂದ ಪುಣೆಯಲ್ಲಿ ಪೇಶ್ವಾ ಆಡಳಿತವು ಗಮನಾರ್ಹವಾಗಿ ದುರ್ಬಲಗೊಂಡಿತು. ಅವರ ಮಾಂಡಲೀಕರಾಗಿ, ಸಾಮಂತರಾಗಿದ್ದ ಹಲವು ಮನೆತನಗಳು ಮುನ್ನೆಲೆಗೆ ಬಂದು ಪ್ರಾಮುಖ್ಯತೆ ಪಡೆಯುತ್ತವೆ. ಅವುಗಳಲ್ಲಿ   ಇಂದೋರ್, ಬರೋಡಾ, ನಾಗ್ಪುರ, ಮತ್ತು ಗ್ವಾಲಿಯರ್ ಈ ನಾಲ್ಕು ಸಂಸ್ಥಾನಗಳು ಪ್ರಮುಖವು.   ಅಹಿಲ್ಯಬಾಯಿ ತನ್ನ ಆಳ್ವಿಕೆಯಲ್ಲಿ ಎದುರಿಸಿದ ದೊಡ್ಡ ಸವಾಲು ಎಂದರೆ ತನ್ನ ಸಾಮ್ರಾಜ್ಯದ ಪಶ್ಚಿಮಕ್ಕೆ ಇದ್ದ ಚಂಬಲ್ ಕಣಿವೆಗಳಲ್ಲಿ ವಾಸಿಸುತ್ತಿದ್ದ ದರೋಡೆಕೋರರು, ಇವರು ಜನಸಾಮಾನ್ಯರಿಂದ ಶ್ರೀಮಂತರವರಿಗೂ ಲೂಟಿಗೈಯುತ್ತಿದ್ದರು. ಇವರ ಕೃತ್ಯಗಳು ಮಿತಿಮೀರಿದ್ದವು. ಈ ದರೋಡೆಕೋರರನ್ನುಸೆದೆಬಡಿದು ಮಟ್ಟಹಾಕಿ ಕೆಳಜಾತಿಯ ಯಶವಂತರಾವ್ ಫಣಸೆ ಅನ್ನೋ  ವೀರನೊಬ್ಬನಿಗೆ ತನ್ನ ಮಗಳನ್ನು ಕೊಟ್ಟು ವಿವಾಹಮಾಡಿ ಜಾತಿಭೇದವನ್ನು ತೊಡೆಯುವ ಆದರ್ಶ ತೋರುತ್ತಾಳೆ. ಗಂಡ ಸತ್ತರೆ ಅವನ ಅಸ್ತಿ ಹೆಂಡತಿಗೆ ಸಿಗುವುದನ್ನು ನಿರಾಕರಿಸಲ್ಪಟ್ಟ ಕಾಲದಲ್ಲಿ ಇಂತಹ ಪದ್ಧತಿ ರುವಾಜುಗಳಿಗೆ ಕಡಿವಾಣ ಹಾಕಿ ಗಂಡನ ಆಸ್ತಿಗೆ ಹೆಂಡತಿ ವಾರಸುದಾರಳೆಂಬ ಕಾನೂನನ್ನು ಜಾರಿಮಾಡಿ ಹೊಸ ಭಾಷ್ಯ ಬರೆದಳು. ದತ್ತು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ನೀಡುವ ಕಾಯ್ದೆಗಳನ್ನು ಜಾರಿಗೆ ತಂದಳು. ಪಾನನಿರೋಧ ಹಾಗೂ ಭ್ರಷ್ಟ ಆಡಳಿತಗಳಂಥ ಅನಿಷ್ಠಕಾರಕ ಸಂಗತಿಗಳನ್ನು ತೊಡೆದು ಹಾಕಲು ರಾಜದಂಡ ಬಳಸಿ ತೊಡೆದುಹಾಕಲು ಪ್ರಯತ್ನಿಸಿದಳು. 



ತನ್ನ ರಾಜಧಾನಿಯನ್ನು ಪ್ರಾಚೀನ ನಗರವಾದ ಮಹೇಶ್ವರದಲ್ಲಿ ನರ್ಮದಾ ನದಿಯ ದಡದಲ್ಲಿ ಸ್ಥಾಪಿಸಿದಳು. ಅವಳು ನಿರ್ಮಿಸಿದ ಬಲಿಷ್ಠ ಕೋಟೆಗಳು  ಇಂದಿಗೂ ದೃಢವಾಗಿ ನಿಂತಿವೆ. ತಮ್ಮ ರಾಜಧಾನಿ ಮಹೇಶ್ವರರನ್ನು ಅಧಿಕಾರದ ಸ್ಥಾನಮಾನವಾಗಿ ಮತ್ತು ಇಂಧೋರ್ ಅನ್ನು ಎಲ್ಲಾ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿ ಬೆಳೆಸಿದಳು. ಅಹಲ್ಯಾಬಾಯಿ ಆಳ್ವಿಕೆಯಲ್ಲಿ ಇಂದೋರ್ ಒಂದು ಸಣ್ಣ ಪಟ್ಟಣವಾಗದೆ ಪ್ರಮುಖ ವ್ಯಾಪಾರ ಕೇಂದ್ರವಾಗಿ ಅಭಿವೃದ್ಧಿ ಹೊಂದಿತು. ಅಹಲ್ಯಾ ಬಾಯಿ ಹೋಳ್ಕರ್ ಜೀವನ ನಿಜಕ್ಕೂ ಆದರ್ಶಪ್ರಾಯವಾಗಿತ್ತು. ರಾಜ್ಯದ ಆದಾಯವನ್ನು ಕುಟುಂಬದ ವೈಯಕ್ತಿಕ ಬಳಕೆಯಾಗದಂತೆ ನೋಡಿಕೊಂಡಳು. ತನ್ನ ವೈಯುಕ್ತಿಕ ಖರ್ಚುಗಳನ್ನು ಆನುವಂಶಿಕವಾಗಿ ಪಡೆದ ಸಂಪತ್ತು ಮತ್ತು ಅವಳು ಹೊಂದಿದ್ದ ಭೂ ಹಿಡುವಳಿಗಳಿಂದ ಬಂದ ಆದಾಯದಿಂದಲೇ ನೋಡಿಕೊಳ್ಳುತ್ತಿದ್ದಳು. ಸಂಸ್ಥಾನವೊಂದರ ಅಧಿಕಾರಿಣಿಯಾಗಿದ್ದರೂ ಬಿಳಿಯ ಸೀರೆ ಧರಿಸಿ, ಭಸ್ಮ ಬಳಿದು ನಿಸ್ಪೃಹಳಾಗಿ ಸಂನ್ಯಾಸಿನಿಯಂತೆ ಜೀವನ ಸಾಗಿಸಿದ ತಪಸ್ವಿನಿ ಅವಳು. ದೇಶವಿಡೀ ಅದೆಷ್ಟೋ ರಾಜ ಮಹಾರಾಜರುಗಳಿಂದ ಸಾಧ್ಯವಾಗದೇ ಉಳಿದಿದ್ದ ಧೀರ ಕಾರ್ಯವನ್ನು ಮಾಡಿ ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದ ಆ ಮಹಾಮಾತೆ ಅಹಲ್ಯಾಬಾಯಿ ಹೋಳ್ಕರ್. ಈಕೆ ಕಟ್ಟಿದ ಶಿವಾಲಯವೇ ಇಂದಿಗೂ ಕಾಶಿ ವಿಶ್ವೇಶ್ವರನ ಸದನವಾಗಿದೆ. ಈ ವಿಚಾರಗಳನ್ನು ಬ್ರಿಟಿಷ್ ರಾಜಪ್ರತಿನಿಧಿ ಜಾನ್ ಮಾಲ್ಕಮ್ ಈ ಆಡಳಿತಾತ್ಮಕ ಸುಧಾರಣೆಗಳನ್ನು ಅವರ ಆತ್ಮಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಇದನ್ನು 1880 ರಲ್ಲಿ ಅವರ ಮರಣದ ನಂತರ ಪ್ರಕಟಣೆಗೊಂಡಿದೆ. 


ಅಂದಿನ ಭಾರತದ ಹೆಚ್ಚಿನ ಸಾಮ್ರಾಜ್ಯಗಳು ವ್ಯಾಪಾರ ಮತ್ತು ಕೃಷಿಯನ್ನು ಅವಲಂಬಿಸಿದ್ದ ಕಾಲಘಟ್ಟದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಮಹೇಶ್ವರದಲ್ಲಿ ನೇಯ್ಗೆ ಮತ್ತು ಜವಳಿಗಳನ್ನು ಉದ್ದೆಮೆಯನ್ನು ಉತ್ತೇಜಿಸಿ ಬೆಳೆಸಿದಳು. ಮೊಘಲ್ ಯುಗದಲ್ಲಿ ಪ್ರಮುಖ ಪಟ್ಟಣವಾದ ಬುರ್ಹಾನ್ಪುರವು ಕೈಮಗ್ಗ ಉದ್ಯಮದ ಪ್ರಮುಖ ಕೇಂದ್ರವಾಗಿತ್ತು. ಮಹೇಶ್ವರದಿಂದ ಬಹಳ ದೂರದಲ್ಲಿಲ್ಲದ ಈ ಪಟ್ಟಣವು ಮೊಘಲ್ ಪ್ರಭಾವವು ಕ್ಷೀಣಿಸಿದ ನಂತರ ತೀವ್ರ ಕುಸಿತಕ್ಕೆ ಒಳಗಾಯಿತು.  ಅಹಿಲ್ಯಾಬಾಯಿ ಈ ಕೆಲವು ನೇಕಾರರನ್ನು ಮಹೇಶ್ವರಕ್ಕೆ ಬರಮಾಡಿಕೊಂಡು. ಸ್ಥಳೀಯ ಉದ್ಯಮವನ್ನು ಪ್ರಾರಂಭಿಸಿದರು. ಈಗಲೂ ಮಾರಾಟವಾಗುವ ಮಹೇಶ್ವರಿ ಸೀರೆಗಳು ದೇಶಾದ್ಯಂತ ಹೆಸರುವಾಸಿಯಾಗಿದೆ. ಕೃಷಿ, ಗೋರಕ್ಷೆ, ವಾಣಿಜ್ಯಕ್ಕೆ ಒತ್ತಾಸೆಯಾಗಿ ಅದ್ಭುತ ದಂಡ ನೀತಿಯಿಂದ ಪ್ರಜಾನುರಾಗಿಯಾಗಿ, ಸುಸಜ್ಜಿತ ಸೈನ್ಯ, ಸದಾ ತುಂಬಿತುಳುಕುವ ಬೊಕ್ಕಸದಿಂದ ಮಾಳ್ವ ಪ್ರಾಂತವನ್ನು ಶ್ರೀಮಂತಗೊಳಿಸಿದ ರಾಜಮಾತೆ. ಅಹಲ್ಯಾಬಾಯಿಯ ಅತ್ಯಂತ ಮಹತ್ವದ ಕೊಡುಗೆಯೆಂದರೆ ಧಾರ್ಮಿಕ ಸಾಧನೆಗಳು. ತನ್ನ 30 ವರ್ಷಗಳ ಆಳ್ವಿಕೆಯಲ್ಲಿ ನಡೆಸಿದ ಹಲವಾರು ಹಿಂದೂ ತಾಣಗಳ ಸಂರಕ್ಷಣೆ, ಪುನರ್ನಿರ್ಮಾಣ ಮತ್ತು ನವೀಕರಣ. ಗಂಗೋತ್ರಿಯಿಂದ ರಾಮೇಶ್ವರಂ ವರೆಗೂ ಮತ್ತು ದ್ವಾರಕಾದಿಂದ ಗಯಾವರೆಗೂ, ಮೊಘಲ್ ಆಳ್ವಿಕೆಯಲ್ಲಿ ನಾಶವಾದ ದೇವಾಲಯಗಳನ್ನು ಪುನರ್ನಿರ್ಮಿಸಲು, ಪವಿತ್ರ ತಾಣಗಳ ಹಿಂದಿನ ವೈಭವವನ್ನು ಪುನಃ ಸ್ಥಾಪಿಸಲು, ಹೊಸ ದೇವಾಲಯಗಳನ್ನು ನಿರ್ಮಿಸಲು ಮತ್ತು ಘಾಟ್‌ಗಳನ್ನು ನಿರ್ಮಿಸಲು ಅವರು ಹಣವನ್ನು ಹೇರಳವಾಗಿ ಖರ್ಚು ಮಾಡಿದಳು. ಅತ್ಯಂತ ಗಮನಾರ್ಹವಾದದ್ದು ವಾರಣಾಸಿಯಲ್ಲಿರುವ ಪ್ರಸ್ತುತ ಕಾಶಿ ವಿಶ್ವನಾಥ ದೇವಾಲಯವನ್ನು ಮಸೀದಿಯನ್ನು ನಿರ್ಮಿಸಲು ಮೊಘಲ್ ದೊರೆ ಔರಂಗಜೇಬನಿಂದ ನಾಶಗೊಂಡ ದೇವಾಲಯ 111 ವರ್ಷಗಳ ಪರ್ಯಂತ ಮಣ್ಣಲ್ಲಿ ಮಣ್ಣಾಗಿದ್ದ ಕಾಶಿ ವಿಶ್ವನಾಥನ ಆಲಯವನ್ನು ಮತ್ತೆ ನಿರ್ಮಿಸಿ ರಾಷ್ಟ್ರೀಯ ಅಪಮಾನವೊಂದನ್ನು ಮುಕ್ತಿಗೊಳಿಸಿದ ವೀರಮಾತೆ. ಅಹಲ್ಯಾಬಾಯಿ ಪ್ರಸಿದ್ಧ ಗಂಗಾ ಆರತಿಯ ತಾಣವಾದ ದ್ವಾದಶ ಘಾಟ್ ಅನ್ನು ನವೀಕರಿಸಿದಳು, ಶತಮಾನಗಳಿಂದಲೂ ಆಕ್ರಮಣಕಾರರಿಂದ ನಿರಂತರ ವಿನಾಶಕ್ಕೆ ಸಾಕ್ಷಿಯಾದ ಸೋಮನಾಥ ದೇವಾಲಯವನ್ನು 1783 ರಲ್ಲಿ ಎಲ್ಲಾ ಮರಾಠ ಒಕ್ಕೂಟಗಳು ಪುನಃಸ್ಥಾಪಿಸಿದವು, ಅಹಿಲ್ಯಬಾಯಿಯಿಂದ ಗಮನಾರ್ಹ ಕೊಡುಗೆ ನೀಡಿದ್ದಳು, ದ್ವಾರಕಾದ ಸೌಲಭ್ಯಗಳ ಸುಧಾರಣೆಗೆ ಅವಳು ಸಹಕರಿಸಿದಳು.  ಭೀಮಾಶಂಕರ್ ಮತ್ತು ತ್ರಿಂಬಕೇಶ್ವರದಲ್ಲಿ ಅಹಲ್ಯಾಬಾಯಿ ಸೇತುವೆಗಳು ಮತ್ತು ವಿಶ್ರಾಂತಿ ಧಾಮಗಳನ್ನು, ಧರ್ಮ ಛತ್ರಗಳನ್ನು ನಿರ್ಮಿಸಿದಳು.  ಶ್ರೀನಗರ, ಹರಿದ್ವಾರ, ಕೇದಾರನಾಥ, ಬದ್ರಿನಾಥ್, ರಿಷಿಕೇಶ, ಪ್ರಯಾಗ, ವಾರಣಾಸಿ, ನೈಮಿಶರಣ್ಯ, ಪುರಿ, ರಾಮೇಶ್ವರಂ, ಸೋಮನಾಥ್, ನಾಸಿಕ್, ಓಂಕಾರೇಶ್ವರ, ಮಹಾಬಲೇಶ್ವರ, ಪುಣೆ, ಇಂದೋರ್, ಶ್ರೀಶೈಲಂ, ಉಡುಪಿ ಈ ಎಲ್ಲಾ ಪುಣ್ಯಕ್ಷೇತ್ರಗಳನ್ನು ಶತ್ರುಗಳ ದಾಳಿಯಿಂದ ಸಂರಕ್ಷಿಸಿದ ವೀರನಾರಿ ಹೃದಯಸಿಂಹಿಣಿ, ಓಂಕಾರೇಶ್ವರ ಮತ್ತು ಉಜ್ಜಯಿನಿಯಲ್ಲಿನ ದೇವಾಲಯಗಳು ಮತ್ತು ವಿಶ್ರಾಂತಿ ಧಾಮಗಳನ್ನು, ಧರ್ಮ ಛತ್ರಗಳನ್ನು ನಿರ್ಮಿಸಿದಳು. ಇಂದು ಉಳಿದುಕೊಂಡಿರುವ ಅಹಲ್ಯಾಬಾಯಿ ನಿರ್ಮಿಸಿದ ಭವ್ಯವಾದ ದೇವಾಲಯ ಗಯಾದ ವಿಷ್ಣುಪದ್ ದೇವಾಲಯವೂ ಒಂದು.  ಪುರಿಯಲ್ಲಿರುವ ರಾಮಚಂದ್ರ ದೇವಸ್ಥಾನ, ರಾಮೇಶ್ವರಂನ ಹನುಮಾನ್ ದೇವಸ್ಥಾನ, ಮತ್ತು ಅಯೋಧ್ಯೆಯ ಸರಯೂ ಘಾಟ್, ಬೇಲೂರು ದೇವಾಲಯ ಜೀರ್ಣೋದ್ದಾರ ( ಇದರ ಬಗ್ಗೆ ಹೆಚ್ಚು ಮಾಹಿತಿ ನನಗೆ ತಿಳಿದು ಬಂದಿಲ್ಲ, ಆದರೆ ಮರಾಠಿ  ವಿಕಿಪೀಡಿಯದಲ್ಲಿ ದಾಖಲಾಗಿದೆ) ಇವೆಲ್ಲವೂ ಅವರ ಕೊಡುಗೆಗಳೇ ಆಗಿವೆ. ತನ್ನ ಮಗನಿಂದಲೇ ಗೋಮಾತೆಯ ಕರುವಿಗೆ ಅನ್ಯಾಯವಾಯಿತೆಂದು ಆತನನ್ನೇ ಶಿಕ್ಷಿಸಲು ಮುಂದಾಗಿದ್ದಂತಹ ಧರ್ಮರಕ್ಷಕಿ!!

ದ್ವಾದಶ ಜ್ಯೋತಿರ್ಲಿಂಗಗಳನ್ನು ಅಭಿವೃದ್ಧಿಪಡಿಸಿದ್ದಾಳೆ, ಅಲ್ಲೆಲ್ಲಾ ದೇವಿ ಅಹಲ್ಯಾಬಾಯಿಯವರ ಹೆಸರು ಪ್ರಸಿದ್ಧಗೊಂಡಿದೆ. ದೇಶದ ಉದ್ದಗಲಕ್ಕೂ ದೇವಾಲಯಗಳ ಜೀರ್ಣೋದ್ಧಾರ ಹಾಗೂ ನಿರ್ಮಾಣ ಮಾಡಿದ್ದಾಳೆ. ದೇವಾಲಯಗಳ ನಿತ್ಯ ಕೈಂಕರ್ಯಕ್ಕೆ ನೀಡಿರುವ ದಾನದತ್ತಿಗಳು, ನಿರ್ಮಿಸಿರುವ ಸ್ನಾನ ಘಟ್ಟಗಳು, ಧರ್ಮ ಛತ್ರಗಳು ಮತ್ತು ಅರವಟ್ಟಿಗೆಗಳು  ಅವರ ಧಾರ್ಮಿಕ ಮನೋಭಾವಕ್ಕೆ ಕೈಗನ್ನಡಿಯಂತಿವೆ. ಮಧ್ಯಪ್ರದೇಶದ ಮಾಹೇಶ್ವರ ಮತ್ತು ಇಂದೋರ್ ಗಳಲ್ಲಿ ಅವರಿಂದ ನಿರ್ಮಾಣಗೊಂಡಿರುವ ಅರಮನೆ, ಕೋಟೆಕೊತ್ತಲುಗಳು, ಸ್ಮಾರಕಗಳು ಅವರು ಸತತವಾಗಿ 33 ವರ್ಷಗಳ ಆಳ್ವಿಕೆ ನಡೆಸಿದ ದ್ಯೋತಕಗಳಾಗಿವೆ. ಅವರನ್ನು ಪುನೀತಗೊಳಿಸಿದ ಪವಿತ್ರ ನರ್ಮದೆಯೂ  ಸಾಕ್ಷಿಯಾಗಿದ್ದಾಳೆ. ಇಂತಹ ವೀರಮಹಿಳೆಯರ ಸಾಹಸಗಾಥೆಗಳು,  ಜೀವನ ಹೋರಾಟಗಳು,  ದಿಟ್ಟ ಸಮಾಜಮುಖಿ ಚಿಂತನೆಗಳು ಚಿಂತನೆಗಳು ಚಿಂತನೆಗಳು, ಅದ್ವಿತೀಯ ಸಾಧನೆಗಳು, ಅಸ್ಥಿರತೆಯಿಂದ ಬಳಲುತ್ತಿರುವ ಮಹಿಳೆಯರಿಗೆ, ಕೆಚ್ಚಿದ್ದರೂ ದೌರ್ಬಲ್ಯದ ವಿರುದ್ಧ ಕೆರಳಲಾರದೆ ಮೌನಸಂಕಟ ಅನುಭವಿಸುತ್ತಿರುವ ನೊಂದ ಒಡಲಿನ ಮೌನದನಿಗಳಿಗೆ ಸ್ಪೂರ್ತಿಯ ಕಿರಣಗಳಾಗಿ, ಕತ್ತಲೆಯಿಂದ ಕವುಚಲ್ಪಟ್ಟು ತೊಳಲಾಡುತ್ತಿರುವ ಮಂದಿಗೆ ಅಹಲ್ಯಾಬಾಯಿ ಹೋಲ್ಕರ್ ಅಂಥ ಘನವ್ಯಕ್ತಿತ್ವವೂ ಆದರ್ಶಪ್ರಾಯವಾಗಿ ನಿಲ್ಲುವಂತ ಜೀವನಗಾಥೆಯಾಗಿದೆ.